ಬಾಂಬೆ ಟೈಮ್ಸ್ -
ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್ ಎಂಬ ಹೆಸರಿನಿಂದ 1838 ನವಂಬರ್ 3 ರಂದು ಮುಂಬಯಿಯಲ್ಲಿ ಪ್ರಾರಂಭ. ಇದೊಂದು ದ್ವಿಸಾಪ್ತಾಹಿಕ. ಇದರ ಮಾಲೀಕ ನಿವೃತ್ತ ಐರಿಷ್ ಡಾಕ್ಟರ್ ಬ್ರೆನನ್. ಈ ಪತ್ರಿಕೆಯನ್ನು ಮುಂಬಯಿಯಲ್ಲಿ ಬಾಂಬೆ ಕೋರಿಯರ್ ಎಂಬ ಹೆಸರಿನಲ್ಲಿ ಲ್ಯೂಕ್ ಆ್ಯಶ್‍ಬರ್ನರ್ 1790ರಲ್ಲಿ ಪ್ರಾರಂಭಿಸಿದರೆಂದೂ 1858ರಲ್ಲಿ ರಾಬರ್ಟ್ ನೈಟ್ ಅವರ ಸಂಪಾದಕತ್ವದಲ್ಲಿ ಪತ್ರಿಕೆಯ ಹೆಸರು ಬಾಂಬೆ ಟೈಮ್ಸ್ ಎಂದಾಯಿತೆಂದೂ ಹೇಳುವುದುಂಟು.

ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್ 13 ವರ್ಷಗಳು ನಡೆದು ಬಂದು ದಿ ಬಾಂಬೆ ಟೈಮ್ಸ್ ಎಂಬ ಹೆಸರಿನಿಂದ ದಿನ ಪತ್ರಿಕೆಯಾಯಿತು. 1840ರಲ್ಲಿ ಜಾರ್ಜ್ ಬೂಯಿಸ್ಟ್ ಸಂಪಾದಕನಾದ, ಈತ ಬ್ರಿಟಿಷರ ಪರವಾಗಿದ್ದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಹತ್ಯೆ ಮಾಡಿದ ಭಾರತೀಯರನ್ನು ತೀವ್ರವಾಗಿ ಶಿಕ್ಷಿಸಬೇಕೆಂದು ಪ್ರತಿಪಾದಿಸುವವರಲ್ಲಿ ಪ್ರಮುಖನಾಗಿದ್ದ. ಪತ್ರಿಕೆಯ ಭಾರತೀಯ ಷೇರುದಾರರಲ್ಲಿ ಒಬ್ಬನಾಗಿದ್ದ ಘರ್ದೂಂಜಿ ಈತನ ಧೋರಣೆಯನ್ನು ವಿರೋಧಿಸಿದ. ತಪ್ಪನ್ನು ಒಪ್ಪಿಕೊಳ್ಳದ ಬೂಯಿಸ್ಟನನ್ನು ಸಂಪಾದಕ ಹುದ್ದೆಯಿಂದ ತೆಗೆದುಹಾಕಲಾಯಿತು. ಮುಂದೆ ರಾಬರ್ಟ್ ನೈಟ್ ಅವರ ಉತ್ತರಾಧಿಕಾರಿ ಆದ. ಪತ್ರಿಕೆಯನ್ನು ರಾಷ್ಟ್ರೀಯ ಆಂದೋಲನ ಬೆಂಬಲಿಸುವ ಆಂಗ್ಲೊಇಂಡಿಯನ್ ಮಾಧ್ಯಮವಾಗಿ ಮಾರ್ಪಡಿಸಿದ. ಗುಜರಾತಿ ಭಾಷೆಯ ಜಾಹಿರಾತುಗಳನ್ನು ಪ್ರಕಟಿಸಿದ ಮತ್ತು 1860ರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಸೇವೆಯನ್ನು ಪಡೆದ ಭಾರತದ ಪ್ರಥಮ ಪತ್ರಿಕೆ ಬಾಂಬೆ ಟೈಮ್ಸ್. ದಿ ಬಾಂಬೆ ಸ್ಟ್ಯಾಂಡರ್ಡ್ 1856ರಲ್ಲೂ ಬಾಂಬೆ ಟೈಮ್ಸ್ ಟೆಲಿಗ್ರಾಫ್ ಮತ್ತು ಕೋರಿಯರ್ ಪತ್ರಿಕೆಗಳು 1861 ಸೆಪ್ಟೆಂಬರ್ 28ರಲ್ಲಿ ವಿಲೀನಗೊಂಡು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಜನಿಸಿತು.
(ನೋಡಿ— ಟೈಮ್ಸ್-ಆಫ್-ಇಂಡಿಯ,-ದಿ)						(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ